ಟೋರಿಚೆಲ್ಲಿ, ಇವಾನ್‍ಜೆಲಿಸ್ಟ

1608-47. ಇಟಲಿಯ ಭೌತವಿಜ್ಞಾನಿ ಮತ್ತು ಗಣಿತಶಾಸ್ತ್ರಜ್ಞ. ಫಯಾನ್ಸ ಎಂಬ ಊರಿನಲ್ಲಿ 1608 ಅಕ್ಟೋಬರ್ 15ರಂದು ಜನನ. ವಿಜ್ಞಾನವ್ಯಾಸಂಗಕ್ಕಾಗಿ ರೋಮ್ ನಗರಕ್ಕೆ ತೆರಳಿ (1627) ಅಲ್ಲಿ ಬೆನೆಡಿಕ್ಟೈನ್ ಬೆನಿಡಿಟ್ಟೊ ಕ್ಯಾಸ್ಟಿಲ್ಲಿ ಎಂಬ ಗಣಿತ ಪ್ರಾಧ್ಯಾಪಕನ ಹತ್ತಿರ ವ್ಯಾಸಂಗ ಮಾಡಿದ. ಗೆಲಿಲಿಯೊವಿನ ವಿಜ್ಞಾನ ಬರಹಗಳಿಂದ (ಥರ್ಡ್ ಡಯಲಾಗ್) ಉತ್ತೇಜಿತನಾಗಿ (1638) ಸ್ವತಃ ತಾನೇ ಒಂದು ವಿಜ್ಞಾನ ಪ್ರಬಂಧವನ್ನು (ದ ಮೋಟು) ಬರೆದ. ಇವನು 1641ರಲ್ಲಿ ಫ್ಲಾರೆನ್ಸಿಗೆ ಹೋಗಿ ಗೆಲಿಲಿಯೊ ಕೈಕೆಳಗೆ ಆತನ ಕಾರ್ಯದರ್ಶಿಯಾಗಿ ಮೂರು ತಿಂಗಳ ಕಾಲ (ಗೆಲಿಲಿಯೊ ಮಡಿಯುವ ವರೆಗೂ) ಕೆಲಸ ಮಾಡಿದ. ಮುಂದೆ ಟೋರಿಚೆಲ್ಲಿ ಗ್ರ್ಯಾಂಡ್ ಡ್ಯೂಕನಿಗೆ ಗಣಿತಶಾಸ್ತ್ರಜ್ಞನನ್ನಾಗಿಯೂ ಫ್ಲಾರೆನ್ಸ್ ಅಕ್ಯಾಡೆಮಿಯಲ್ಲಿ ಗಣಿತ ಪ್ರಾಧ್ಯಾಪಕನಾಗಿಯೂ ನೇಮಕಗೊಂಡ.

	ಟೋರಿಚಿಲ್ಲಿಯ ಸಂಶೋಧನೆಗಳು ಬಹುಮುಖವಾಗಿದ್ದವು. ಅವನ ಒಪೆರ ಜ್ಯೊಮೆಟ್ರಿಕ್ ಎಂಬ ಬರೆವಣಿಗೆ ಅತ್ಯಂತ ಪ್ರಧಾನವಾದುದು. ಶಂಕುಜಗಳನ್ನೂ ಶಂಕುಜಕಲ್ಪಗಳನ್ನೂ ಕುರಿತು ವ್ಯಾಪಕ ಸಂಶೋಧನೆ ನಡೆಸಿದ. ತರಲ ಮತ್ತು ಅನಿಲಗಳ ಚಲನೆ, ವಿಕ್ಷೇಪಗಳ ಸಿದ್ಧಾಂತ, ರಾಟೆಯ ಮೇಲೆ ಹಾದುಹೋಗುವ ದಾರದ ತುದಿಗಳಿಗೆ ಸೇರಿಸುವ ವಸ್ತುಗಳ ಚಲನೆ ಇತ್ಯಾದಿ ವಿಷಯಗಳನ್ನು ಕುರಿತು ವಿಶೇಷವಾಗಿ ಬರೆದಿರುವುದು. ಬಿ. ಕೆವೆಲಿಯರ್ ಎಂಬಾತನ ಅವಿಭಾಜ್ಯಗಳ ವಿಧಾನವನ್ನು (ಮೆಥಡ್ ಆಫ್ ಇನ್‍ಡಿವಿಸಿಬಲ್ಸ್) ಉಪಯೋಗಿಸುವುದರ ಜೊತೆಗೆ ಅದನ್ನು ಇನ್ನೂ ಮುಂದುವರಿಸಿದ; ದೂರದರ್ಶಕ ಮತ್ತು ಸೂಕ್ಷ್ಮದರ್ಶಕ ರಚನೆ ಉತ್ತಮಗೊಳ್ಳಲು ಬಲುಮಟ್ಟಿಗೆ ಈತ ಕಾರಣನಾದ.

	ಭೂಮಿಯ ಸುತ್ತ ವಾಯುಮಂಡಲ ಇದೆಯೆಂಬುದನ್ನು ಅದರಿಂದ ನಿರ್ದಿಷ್ಟವಾದ ಒತ್ತಡ ಉಂಟಾಗುವುದೆಂಬುದನ್ನೂ ಟೋರಿಚೆಲ್ಲಿಯೇ ಮೊದಲ ಬಾರಿಗೆ ಪ್ರತಿಪಾದಿಸಿದ್ದು. ವಾಯುಮಂಡಲದ ಒತ್ತಡವನ್ನು ಅಳೆಯಲು ಬಳಸುವ ವಾಯುಭಾರಮಾಪಕ ಎಂಬ ಉಪಕರಣವನ್ನು ಸೃಷ್ಟಿಸಿದ ಕೀರ್ತಿ ಈತನದು. ವಾಯುಭಾರಮಾಪಕದಲ್ಲಿ ಪಾದರಸದ ಮೇಲ್ಭಾಗದಲ್ಲಿರುವ ನಿರ್ವಾತವನ್ನು ಸೃಷ್ಟಿಸಿದವರಲ್ಲಿ ಈತನೇ ಮೊದಲಿಗ. ಈತನ ಸಂಶೋಧನೆಗಳಲ್ಲಿ ಟೋರಿಚೆಲ್ಲಿ ಪ್ರಮೇಯ ಎಂಬುದು ಮುಖ್ಯವಾದದ್ದು. ಜಲಾಶಯದ ಪಕ್ಕದಲ್ಲಿ ವೃತ್ತಾಕಾರದ ರಂಧ್ರವಿದ್ದರೆ ಅದರ ಮೂಲಕ ದ್ರವ ಹೊರಬೀಳುವುದು. ರಂಧ್ರದಿಂದ ದ್ರವ ಹರಿಯುವ ವೇಗ v= ಎಂದು ಟೋರಿಚೆಲ್ಲಿ ಕಂಡುಹಿಡಿದ. (ಇಲ್ಲಿ g ಗುರುತ್ವ : h ರಂಧ್ರದಿಂದ ದ್ರವದ ಮಟ್ಟಕ್ಕಿರುವ ದೂರ). 	ಮರಣ 1647ರ ಅಕ್ಟೋಬರ್ 25ರಂದು.
(ಆರ್.ಎ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ